ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಲೆಹ್ರಾ ದೋ ತಿರಂಗಾ’ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಬಂಧನಕ್ಕೊಳಗಾಗಿದ್ದ CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಶಾಂತಿ ಪರಿಪಾಲನಾ ಬಾಂಡ್ಗೆ ಸಹಿ ಹಾಕಿದ ನಂತರ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ಶಾಂತಿ ಭಂಗ ತಂದ ಆರೋಪದ ಮೇಲೆ ದೀಪ್ಕೆ ಅವರನ್ನು ಶನಿವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಅಕ್ರಮ ಬಂಧನ ಎಂದು ಆರೋಪ
ಅಭಿಜಿತ್ ದೀಪ್ಕೆ ಅವರ ಬಂಧನ ಕಾನೂನುಬಾಹಿರವಾಗಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಕೋರ್ಟ್ಗೆ ಮನವಿ ಮಾಡಿದ್ದರು. ಅಭಿಜೀತ್ ಅವರು ಕೇವಲ ತ್ರಿವರ್ಣ ಧ್ವಜ ಹಾರಿಸುವಂತೆ ಜನರಿಗೆ ಕರೆ ನೀಡಿದ್ದರು. ಇದು ಹೇಗೆ ಅಪರಾಧವಾಗುತ್ತದೆ? ಎಂದು ಪ್ರಶ್ನಿಸಿದ್ದ ಅವರು, ಪೊಲೀಸರು ದೀಪ್ಕೆ ಅವರನ್ನು ಮನೆಯ ಹೊರಗಿನಿಂದಲೇ ಅಪಹರಿಸಿದಂತೆ ಕರೆದೊಯ್ದಿದ್ದಾರೆ, ಅವರ ಇರುವಿಕೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ ಹಾಗೂ ವಕೀಲರಿಗೂ ಭೇಟಿಯಾಗಲು ಅವಕಾಶ ಕೊಟ್ಟಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
ಪ್ರತಿಭಟನೆಯ ಹಿನ್ನೆಲೆ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಂಟಿ ಜಂತರ್ ಮಂತರ್ ಹಾಗೂ ಕನಾಟ್ ಪ್ಲೇಸ್ನಲ್ಲಿ ವಿರೋಧ ಪಕ್ಷಗಳು, ಇಂಡಿಯಾ ಒಕ್ಕೂಟ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದರೆ, ಕೇಂದ್ರ ದೆಹಲಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಬಿಎನ್ಎಸ್ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಮುಂದಾದ ಸುಮಾರು 150 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸಿಜೆಪಿ ಕಾರ್ಯಕರ್ತರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನೇಹಾ ಬೋರಾ ಬಿಡುಗಡೆ
ಇದೇ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಶುಕ್ರವಾರ ಮಂಡಿ ಹೌಸ್ ಬಳಿ ವಶಕ್ಕೆ ಪಡೆದಿದ್ದರು. ಶನಿವಾರ ಮುಂಜಾನೆ ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 65 ರ ಅಡಿಯಲ್ಲಿ ಫಾರ್ಮಾಲಿಟಿಗಳನ್ನು ಮುಗಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:
ಬಿಡುಗಡೆಯಾದ ಬಳಿಕ ಮಾತನಾಡಿದ ನೇಹಾ ಬೋರಾ, ದೆಹಲಿ ಪೊಲೀಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನನ್ನನ್ನು ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲೇ ಇರಿಸಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಔಷಧ ನೀಡಲು ಪೊಲೀಸರು ನಿರಾಕರಿಸಿದ್ದರು. ಇಂತಹ ಅಕ್ರಮ ಬಂಧನಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಿ ಜೈಲಿಗೆ ಅಟ್ಟಬೇಕು ಮತ್ತು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕನಾಟ್ ಪ್ಲೇಸ್ ಸುತ್ತಮುತ್ತ ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ರಾಪಿಡ್ ಆಕ್ಷನ್ ಫೋರ್ಸ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.



