ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ, ಬಡವರಿಗೆ ನಿವೇಶನ ಹಂಚಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಜಾರಿ ಇವೆಲ್ಲವನ್ನೂ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿರಿಯೂರಿನಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
2,328 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ; ರಾಜ್ಯದ ಪ್ರಜಾಸೇವಕನಾಗಿ ನುಡಿದಂತೆ ನಡೆಯುತ್ತೇನೆ ಎಂದು ಹೇಳುವ ಮೂಲಕ ಅಭಿವೃದ್ಧಿಯ ಭರವಸೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನ ಪ್ರಸ್ತಾಪ
ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ವಿರೋಧ ಪಕ್ಷದವರು ಟೀಕಿಸಿ ನಕ್ಕಿದ್ದರು. ಆದರೆ ಸರ್ಕಾರ ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಸಿಎಂ ಹೇಳಿದರು. ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದು, ಅಕ್ಕಿ ಮತ್ತು ಅದರ ಬದಲಿಗೆ ಹಣ ನೀಡಲಾಗುತ್ತಿದೆ. ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:
ಹಿರಿಯೂರಿಗೂ ಅಭಿವೃದ್ಧಿಯ ‘ಲಕ್ಷ್ಮೀ’
ಹಿರಿಯೂರು ಕ್ಷೇತ್ರವನ್ನು ಕನಕಪುರದಷ್ಟೇ ಮಹತ್ವದ ಕ್ಷೇತ್ರವೆಂದು ಪರಿಗಣಿಸಿರುವುದಾಗಿ ಹೇಳಿದ ಸಿಎಂ, 2,300 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ತಂದಿರುವುದಾಗಿ ತಿಳಿಸಿದರು. ಗ್ರಾಮ ಮತ್ತು ಹಳ್ಳಿಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಿ ಕಾರ್ಯಾರಂಭ ಮಾಡಲಾಗಿದೆ ಎಂದರು. ಧರ್ಮಪುರದಲ್ಲಿ 3 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಘೋಷಿಸಿದರು.
ಬಡವರಿಗೆ ನಿವೇಶನ, ರೈತರಿಗೆ ವಿದ್ಯುತ್ ನೆರವು
ರಾಜ್ಯದ ಐದು ಲಕ್ಷ ಬಡವರಿಗೆ ನಿವೇಶನ ಹಂಚುವ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿ ಖರೀದಿಸಿ ಸೈಟ್ ನೀಡಲಾಗುವುದು. ಇದನ್ನು ಸರ್ಕಾರದ ಆರನೇ ಗ್ಯಾರಂಟಿಯಾಗಿ ‘ಭೂಮಿ ಗ್ಯಾರಂಟಿ’ ರೂಪದಲ್ಲಿ ಜಾರಿಗೊಳಿಸುವ ಉದ್ದೇಶವಿದೆ ಎಂದು ಹೇಳಿದರು. ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದನ್ನೂ ಅವರು ಉಲ್ಲೇಖಿಸಿದರು.



