ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೂರ್ಯ ಅಭಿನಯದ ‘ಸೀನ್’ ಸಿನಿಮಾ ಬಿಡುಗಡೆಯಾದ ಕಡಿಮೆ ಅವಧಿಯಲ್ಲೇ ಸಿನಿಪ್ರಿಯರ ಮನಗೆದ್ದಿದೆ. ‘ರಾಮಾಯಾಣ’ದಂತಹ ಭಾರಿ ಬಜೆಟ್ ಮತ್ತು ಬಹುತಾರಾಗಣದ ಚಿತ್ರಗಳ ಎದುರು ತೆರೆಕಂಡರೂ, ತನ್ನ ಗಟ್ಟಿಯಾದ ಕಥಾಹಂದರದಿಂದಲೇ ‘ಸೀನ್’ ದೊಡ್ಡ ಯಶಸ್ಸು ಕಂಡಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿರುವ ಈ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 300 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಚಿಕೊಂಡು ಸದ್ದು ಮಾಡುತ್ತಿದೆ.
ಸಾಮಾನ್ಯ ಕಳ್ಳ-ಪೊಲೀಸ್ ಕಥೆಗಿಂತ ವಿಭಿನ್ನವಾದ ಹಾದಿಯಲ್ಲಿ ಸಾಗುವ ‘ಸೀನ್’, ಕೊಲೆ ತನಿಖೆ, ಪ್ರೇಮಕಥೆ ಮತ್ತು ಹಲವು ಕುತೂಹಲಕಾರಿ ತಿರುವುಗಳನ್ನು ಒಳಗೊಂಡಿದೆ. ‘ರೋಮಾಂಚಂ’ ಹಾಗೂ ‘ಆವೇಶಂ’ನಂತಹ ಹಿಟ್ ಚಿತ್ರಗಳನ್ನು ನೀಡಿದ್ದ ಜೀತು ಮಾಧವನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ‘ಸೀನ್’ ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕವೂ ಖಚಿತವಾಗಿದೆ. ವರದಿಗಳ ಪ್ರಕಾರ, ಜನಪ್ರಿಯ ಒಟಿಟಿ ಸಂಸ್ಥೆ ನೆಟ್ಫ್ಲಿಕ್ಸ್ ಬರೋಬ್ಬರಿ 88 ಕೋಟಿ ರೂಪಾಯಿಗೆ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ. ತಮಿಳಿನ ಈ ಚಿತ್ರ ಇದೇ ಡಿಸೆಂಬರ್ 4ರಂದು ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬರಲಿದ್ದು, ತಮಿಳು ಮಾತ್ರವಲ್ಲದೆ ಇತರ ಹಲವು ಭಾಷೆಗಳಲ್ಲೂ ವೀಕ್ಷಣೆಗೆ ಸಿಗಲಿದೆ. ಒಟಿಟಿ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಿರುವ ಈ ಚಿತ್ರವನ್ನು ಮನೆಯಲ್ಲೇ ಕುಳಿತು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸೂರ್ಯ ಅವರ ಪಾಲಿಗೆ ಈ ವರ್ಷ ಸಿನಿಮಾ ರಂಗದಲ್ಲಿ ಸುವರ್ಣ ಅಧ್ಯಾಯವಾಗಿದೆ. ಇದೇ ವರ್ಷ ತೆರೆಕಂಡಿದ್ದ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿದ್ದವು. ಈಗ ‘ಸೀನ್’ ಚಿತ್ರವೂ ಭಾರಿ ಯಶಸ್ಸು ಗಳಿಸುವ ಮೂಲಕ, ಒಂದೇ ವರ್ಷದಲ್ಲಿ ಸೂರ್ಯ ನಟನೆಯ ಮೂರನೇ ದೊಡ್ಡ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಟೆಂಟ್ ಆಧಾರಿತ ಸಿನಿಮಾಗಳ ಮೂಲಕ ಸೂರ್ಯ ಮತ್ತೊಮ್ಮೆ ತಮ್ಮ ತಾಕತ್ತು ಸಾಬೀತುಪಡಿಸಿದ್ದಾರೆ.



