ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಪಿಜ್ಜಾ ವಿತರಣೆಗಾಗಿ ತೆರಳಿದ್ದ ಭಾರತೀಯ ಮೂಲದ ಯುವಕನೊಬ್ಬ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ಆಘಾತ ಮೂಡಿಸಿದೆ.
ತೆಲಂಗಾಣ ಮೂಲದ 28 ವರ್ಷದ ಅಂಶುಲ್ ಕುಂಚಾ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ವಾರಾಂತ್ಯಗಳಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಡೆಲಿವರಿ ಕೆಲಸ ಮಾಡುತ್ತಿದ್ದರು.
ನಿರ್ಜನ ಪ್ರದೇಶದಲ್ಲಿ ದಾಳಿ
ಶನಿವಾರ ರಾತ್ರಿ ಬಂದ ಆರ್ಡರ್ ಅನುಸರಿಸಿ ನಿಗದಿತ ಸ್ಥಳಕ್ಕೆ ತೆರಳಿದ್ದ ವೇಳೆ ಅಂಶುಲ್ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ತಲೆಗೆ ಗುಂಡೇಟು ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
ದರೋಡೆ ಶಂಕೆಗೆ ಅವಕಾಶವಿಲ್ಲ
ಘಟನೆ ಬಳಿಕ ಅವರ ಬಳಿ ಇದ್ದ ಯಾವುದೇ ವಸ್ತುಗಳು ಕಳುವಾಗಿಲ್ಲ. ಇದರಿಂದ ಇದು ಸಾಮಾನ್ಯ ದರೋಡೆ ಪ್ರಕರಣವಲ್ಲ, ಪೂರ್ವಯೋಜಿತ ದಾಳಿ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಘಟನಾ ಸ್ಥಳದ ಸುತ್ತಮುತ್ತ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಕಾಣಿಸಿಕೊಂಡಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ.
ಕುಟುಂಬದ ಭಾವುಕ ಮನವಿ
ಅಂಶುಲ್ ಸಹೋದರಿ, ಈ ಆರ್ಡರ್ ಉದ್ದೇಶಪೂರ್ವಕವಾಗಿ ನೀಡಲಾದ ಬಲೆ ಎಂದು ಆರೋಪಿಸಿದ್ದು, ಮೃತದೇಹವನ್ನು ಶೀಘ್ರ ಭಾರತಕ್ಕೆ ತರಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಘಟನೆಗೆ ಸಂತಾಪ ಸೂಚಿಸಿರುವ ಭಾರತೀಯ ಕಾನ್ಸುಲೇಟ್, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



