ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಹ್ರಾನ್‌ನಲ್ಲಿ ಇತ್ತೀಚೆಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ, ಇರಾನ್ ನಾಯಕತ್ವವು ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದೆ.
ಖಮೇನಿ ಆರೋಗ್ಯ ಹದಗೆಟ್ಟಿದೆ ಎಂಬ ವರದಿಗಳನ್ನು ಇರಾನ್ ಖಂಡಿಸಿದ್ದು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಆಡಳಿತ ಕಾರ್ಯಗಳನ್ನು ಸಕ್ರೀಯವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ.
ಸುಪ್ರೀಂ ನಾಯಕನ ಆಪ್ತ ವಲಯದ ಅಯತೊಲ್ಲಾ ಮೊಹ್ಸೆನ್ ಕೋಮಿ ಮಾತನಾಡಿ, ವಿದೇಶಿ ರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದರು. ದೇಶದೊಳಗಿನ ಬೆಳವಣಿಗೆಗಳ ಮೇಲೆ ಖಮೇನಿ ನೇರ ನಿಗಾ ವಹಿಸಿದ್ದು, ಹಲವು ಮಹತ್ವದ ನಿರ್ಧಾರಗಳಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ:
ಇದೇ ವೇಳೆ, ಖಮೇನಿ ಇತ್ತೀಚೆಗೆ ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲಿ ಇದ್ದರು ಎಂಬ ಮಾಹಿತಿಯನ್ನೂ ಕೋಮಿ ದೃಢಪಡಿಸಿದರು. ಆದರೆ ಸ್ಫೋಟ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಅವರು ಸ್ಥಳದಿಂದ ಹೊರಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸಿದರು. ದಾಳಿಯಲ್ಲಿ ಅಲ್ಲಿದ್ದ ಇತರರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಖಮೇನಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ದೇಶದ ಆಡಳಿತ ಮತ್ತು ಭದ್ರತಾ ವಿಚಾರಗಳಲ್ಲಿ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ. ಈ ಹೇಳಿಕೆಯೊಂದಿಗೆ, ಅವರ ಆರೋಗ್ಯದ ಬಗ್ಗೆ ಹರಡಿದ್ದ ಹಲವು ವದಂತಿಗಳಿಗೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ.



