ಮೂಗು ಯಾವಾಗಲೂ ಮುಚ್ಚಿರುವ ಹಾಗೆ ಅನಿಸುತ್ತಿದೆಯಾ? ತಲೆ ಭಾರವಾಗಿದೆಯಾ? ಬೆಳಗ್ಗೆ ಎದ್ದ ಕೂಡಲೇ ಕಣ್ಣುಗಳ ಸುತ್ತ ನೋವು ಅಥವಾ ಒತ್ತಡ ಅನುಭವವಾಗ್ತಿದೆಯಾ? ಹೀಗೆ ಆಗ್ತಿದ್ರೆ ಅದು ಸಾಮಾನ್ಯ ಶೀತ ಮಾತ್ರ ಅಲ್ಲ, ಸೈನಸ್ ಸಮಸ್ಯೆಯ ಸೂಚನೆ ಆಗಿರಬಹುದು. ಹಲವರು ಇದನ್ನು ಸಾಮಾನ್ಯ ಅಂತ ನಿರ್ಲಕ್ಷ್ಯ ಮಾಡ್ತಾರೆ. ಆದರೆ ಲಕ್ಷಣಗಳು ಮುಂದುವರಿದರೆ ಗಮನ ಕೊಡುವುದು ತುಂಬಾ ಮುಖ್ಯ.
ಸೈನಸ್ ಅಂದರೆ ಮೂಗಿನ ಸುತ್ತಲಿನ ಗಾಳಿಯಿಂದ ತುಂಬಿರುವ ಸಣ್ಣ ಫಿಲ್ಟರ್ ಎಂದು ಹೇಳಬಹುದು. ಇವುಗಳಲ್ಲಿ ಉರಿಯೂತ ಅಥವಾ ಕಫ ಜಮೆಯಾದಾಗ ಉಸಿರಾಟಕ್ಕೂ ತೊಂದರೆ ಆಗಬಹುದು.
ಸೈನಸ್ ಇರುವ ಪ್ರಮುಖ ಲಕ್ಷಣಗಳು:
ಮೂಗು ನಿರಂತರವಾಗಿ ಮುಚ್ಚಿರುವುದು
ಒಂದು ಅಥವಾ ಎರಡೂ ಮೂಗಿನ ದ್ವಾರಗಳು ಬ್ಲಾಕ್ ಆಗಿರುವಂತೆ ಅನಿಸುತ್ತದೆ. ಉಸಿರಾಟಕ್ಕೆ ಕಷ್ಟವಾಗಬಹುದು.
ನೆತ್ತಿ ಮತ್ತು ಕಣ್ಣು ಸುತ್ತ ನೋವು
ನೆತ್ತಿ, ಮೂಗಿನ ಪಕ್ಕ, ಕಣ್ಣುಗಳ ಕೆಳಭಾಗದಲ್ಲಿ ಒತ್ತಡ ಅಥವಾ ನೋವು ಕಾಣಿಸಬಹುದು. ತಲೆ ಕೆಳಗೆ ಬಾಗಿದಾಗ ಹೆಚ್ಚು ಆಗುತ್ತದೆ.
ದಪ್ಪ ಕಫ ಅಥವಾ ಮೂಗಿನಿಂದ ಹಳದಿ/ಹಸಿರು ಸ್ರಾವ
ಸಾಮಾನ್ಯ ಶೀತಕ್ಕಿಂತ ದಪ್ಪವಾದ ಕಫ ಬರುತ್ತಿದ್ದರೆ ಅದು ಸೈನಸ್ ಲಕ್ಷಣವಾಗಿರಬಹುದು.
ಇದನ್ನೂ ಓದಿ:
ಬೆಳಗ್ಗೆ ಹೆಚ್ಚು ತಲೆನೋವು
ಎದ್ದ ಕೂಡಲೇ ತಲೆ ಭಾರವಾಗಿರುವುದು ಅಥವಾ ಮುಖ ತುಂಬಾ ಒತ್ತಡವಾಗಿರುವ ಅನುಭವ ಸೈನಸ್‌ನ ಸಾಮಾನ್ಯ ಲಕ್ಷಣ.
ಗಂಟಲು ಕೆರೆತ ಮತ್ತು ಕೆಮ್ಮು
ಮೂಗಿನ ಹಿಂಭಾಗದಿಂದ ಕಫ ಗಂಟಲಿಗೆ ಇಳಿಯುವುದರಿಂದ ರಾತ್ರಿ ಕೆಮ್ಮು ಹೆಚ್ಚಾಗಬಹುದು.
ಇಂತಹ ಸಮಸ್ಯೆಗಳು ಕೆಲವು ದಿನಗಳಿಗಿಂತ ಹೆಚ್ಚು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಧೂಳು-ಚಳಿ ತಪ್ಪಿಸುವುದು ಸಹಾಯ ಮಾಡಬಹುದು.



